karunada geleya

dsfdsf

9 Feb 2022

ನುಡಿಮುತ್ತುಗಳು ನೀತಿ ಮಾತುಗಳು




1. ಅಂಥವಿಂಥ ಹುಚ್ಚುಗಳಿಗಿಂತ
ಬಹಿರಾಂತರ್ಯದಿಂದ ಒಳ್ಳೆಯವರಾಗಿರುತ್ತೇವೆನ್ನುವ
ಹುಚ್ಚು ಬೆಳೆಸಿಕೊಂಡರೆ ಜೀವನ ಪೆಚ್ಚಾಗದು.

2.ಜಗತ್ತು ನಮ್ಮನ್ನು ನೋಡಲಿ 
ಎಂಬ ಆಸೆಯಿಂದ ಪರ್ವತ ಏರುವ ಬದಲು
ನಾವು ಜಗತ್ತನ್ನು ನೋಡುವ ಇಚ್ಛೆಯಿಂದ ಹತ್ತಬೇಕು.

3. ಕಾಲದೊಂದಿಗೆ ನಾವೂ ತೆರಳುವುದು ಸಾಮಾನ್ಯ.
ಆದರೆ ಕಾಲವಾಗದ ಕೃತಿಯೊಂದಿಗೆ 
ಹೆಸರು ಬಿಟ್ಟು ತೆರಳುವುದು ಅಸಾಮಾನ್ಯ.

4. ಸಲ್ಲದ್ದು ಒಗೆ,
ಬೇಕಾದ್ದು ಬಗೆ,
ಎಲ್ಲವೆಲ್ಲವಾಗಲಿ ಲಗುಬಗೆ,
ಇಲ್ಲದಿದ್ದರೆ ಮಣ್ಣು-ಹೊಗೆ.

5. ಅಹಂಕಾರ ಮತ್ತು ಅಧಿಕಾರ
ಒಟ್ಟಾದರೆ ಅಭಿವೃದ್ಧಿ ಅಸಾಧ್ಯ, 
ಅಧಿಕಾರದ ಜೊತೆಗೆ ಜವಾಬ್ದಾರಿ
     ಮತ್ತು 
ದೇಶಾಭಿಮಾನ ಬೆಸೆದರೆ
ಅಭಿವೃದ್ಧಿ ಎಂಬುದು ತಾನಾಗಿ ಆಗುತ್ತದೆ.

6. ಸಂದರ್ಭಗಳು ಸಂಭವಿಸಿದಾಗ 
ಗೈವ ಯತುನಗಳು ಫಲಶ್ರುತಿ ನೀಡಾವು. 
ಆತುರದ ಅಮಲಲಿ ಅಡಿಯಿಡುವ ಹೆಜ್ಜೆಗಳು ಇನ್ನಿಲ್ಲದೆ ಸೋತಾವು.

7. ಅನ್ನ ಇದ್ದರೆ ಉಪವಾಸವಿಲ್ಲ,
ಶಿಕ್ಷಣ ಇದ್ದರೆ ವನವಾಸವಿಲ್ಲ, 
ಜ್ಞಾನದಿಂದ ಅಧಿಕಾರ ಸಿಗಬಹುದು, 
            ಆದರೆ 
ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಲೆಬೇಕು.

8. ಮನುಷ್ಯನು ಅನುಕೂಲಗಳು ಹೆಚ್ಚಿದಂತೆಲ್ಲಾ ಸೋಮಾರಿಯಾಗುತ್ತಾನೆ,
ಅವಕಾಶಗಳು ಹೆಚ್ಚಿದಂತೆಲ್ಲಾ ಅವಿದೇಯನಾಗುತ್ತಾನೆ,
ಆದಾಯ ಹೆಚ್ಚಿದಂತೆಲ್ಲಾ ಅಹಂಕಾರಿಯಾಗುತ್ತಾನೆ,
ಅಧಿಕಾರ ಹೆಚ್ಚಿದಂತೆಲ್ಲಾ ಅಲ್ಪನಾಗುತ್ತಾನೆ.
ಇವೆಲ್ಲವನ್ನೂ ಮೀರಿ ನಡೆದವರು ಮಾತ್ರ ವಿಶೇಷವಾಗುತ್ತಾರೆ ಮತ್ತು ಶ್ರೇಷ್ಠವೆನಿಸುತ್ತಾರೆ.

9. ಜಗದ ಕಾವಲಿಗೆ ನಮ್ಮ ನೇಮಕವಾಗಿದೆ, 
ಅದನ್ನು ರಕ್ಷಿಸಿ ತೆರಳುವುದಷ್ಟೇ ಕೆಲಸ, 
ಅದು ನೀಡುವ ಸವಲತ್ತುಗಳೇ ಹೇರಳ, 
ಕಿತ್ತುಕೊಂಡರೆ ನಮ್ಮ ಅಸ್ತಿತ್ವಕ್ಕೆ ನಷ್ಟ.

10. ಕೆಟ್ಟ ಕಾರ್ಯಮಾಡುವವನು ಕಣ್ಣಿದ್ದರೂ ಕುರುಡ, 
ಒಳ್ಳೆಯ ಮಾತು ಕೇಳದವನು ಕಿವಿ ಇದ್ದರೂ ಕಿವುಡ,
ಪ್ರೀತಿಯಿಂದ ಮಾತನಾಡಲು ಬರದವನೂ ಬಾಯಿಯಿದ್ದರೂ ಮೂಕ.

10. ಬರೀ ಜ್ಞಾನ ಇದ್ದರೆ ಸಾಲದು, 
ಬುದ್ದಿವಂತಿಕೆಯಿಂದ ಅನುಷ್ಠಾನಕ್ಕೆ ತಂದರೆ
ಮಾತ್ರ ಜ್ಞಾನದ ವೃದ್ಧಿಯಾಗುತ್ತದೆ.

11. ನಿಮ್ಮ ಜೀವನವನ್ನು ಎಂದಿಗೂ
ಇತರರೊಂದಿಗೆ ಹೋಲಿಸಬೇಡಿ.
'ಸೂರ್ಯ' ಮತ್ತು 'ಚಂದ್ರ'ರ
ನಡುವೆ ಯಾವುದೇ ಹೋಲಿಕೆ ಇಲ್ಲ. 
ಅವರ ಸಮಯ ಬಂದಾಗ ಅವರು ಹೊಳೆಯುತ್ತಾರೆ.

12. ವಂಶವಾಹಿಯಾಗಿ ಅಧಿಕಾರ ಸಿಕ್ಕಿದವನಿಗೆ 
ಅಧಿಕಾರದ ದರ್ಪವಿರುತ್ತದೆ. 
ನಾಯಕನಾಗಿ ಅಧಿಕಾರ ಪಡೆದರೆ ಸಿಕ್ಕ ಅಧಿಕಾರಕ್ಕೆ ಗೌರವ ಸಿಗುತ್ತದೆ.

13. ನಿನ್ನ ಮುಂದೆ ಇರುವ ಒಂದು 
ಮೆಟ್ಟಿಲನ್ನ ಮಾತ್ರ ಗಮನಿಸು, 
ಎಲ್ಲಾ ಮೆಟ್ಟಿಲುಗಳನ್ನಲ್ಲ. 
ನಿನ್ನ ಬದುಕಿಗೆ ನೀನೇ ಬ್ರಹ್ಮ, 
ನೀ ಆಡಿಸಿದ ಹಾಗೆ ಆಡುತ್ತೆ ನಿನ್ನ ಬದುಕು.

14. ಮುಂದುವರೆದಂತೆಲ್ಲ ಒಮ್ಮೊಮ್ಮೆ 
ಹಿಂದೆಯೂ ಅವಲೋಕಿಸಬೇಕು 
ಇಲ್ಲದಿದ್ದರೆ ಅಹಂ ನೆತ್ತಿಗೇರಿ, 
ವ್ಯಕ್ತಿತ್ವ ಹನನದ ಬೀಸುಗತ್ತಿಯಾದೀತು.

15. ಇನ್ನೇನು ಮತ್ತೇನು ಗತಿಯೆಂದು ಬೆದರದಿರು. 
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ, 
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು ತಣ್ಣಗಿರಿಸಾತ್ಮವನು.

16. ಮಾತಿಗೆ ಮಾತು ಬೆಳೆಸುತ್ತಲೇ 
ಅದರ ಮಹತ್ವ ಮಸುಕಾಗಿಸಬಾರದು.
ಅದು ಪ್ರಸಾದದಂತಿದ್ದಾಗ ಆಡುವ-ಆಲಿಸುವರಿಬ್ಬರೂ 
ಕಣ್ಣಿಗೊತ್ತಿಕೊಂಡು ಸ್ವೀ ಕರಿಸಬಹುದು.

17.ನಿನ್ನೆಯ ಅನುಭವವನ್ನು 
ಇಂದಿನ ಪ್ರಯೋಗಕ್ಕೊಳಪಡಿಸಿದಾಗ 
ನಾಳಿನ ನಿರೀಕ್ಷೆಯನ್ನು 
ಅದ್ಭುತವಾಗಿಸಿಕೊಳ್ಳಬಹುದು.

18. ಜೀವನದಲ್ಲಿ ಯಶಸ್ವಿ ಸಾಧನೆಯ 
ಪಯಣಕ್ಕೆ ಏಕಾಂಗಿಯಾಗಿಯೇ ಮುನ್ನಗ್ಗಬೇಕು. 
ಆದರೆ ಶ್ರೇಷ್ಟ ಸಂಕಲ್ಪ ಹೊಂದಿರುವವನಿಗೆ 
ಜೀವನವೇ ನೂರಾರು ಒಳ್ಳೆಯ ವ್ಯಕ್ತಿಗಳನ್ನು 
ಜೊತೆ ಮಾಡಿಕೊಡುತ್ತದೆ.

19. ಹೂವಿನಿಂದ ಹೊತ್ತು ತಂದ ಮಕರಂದದಿಂದ ಮಾಡಿದ ಜೇನು
ಜೇನುಹುಳಗಳಿಗೇ ದಕ್ಕುವುದಿಲ್ಲ ಎಂದಾದರೆ,
ಪರರ ಬಳಿ ಕಿತ್ತು ಮಾಡಿದ ಸಂಪತ್ತು ಉಳಿಯುವದೆ?
ಕಿತ್ತು ತಂದದ್ದು ಹೊತ್ತುಮುಳುಗುವವರೆಗೆ.

20. ನೀರಿನಲ್ಲಿ‌ ಮುಳುಗುವುದರಿಂದ‌ ಪ್ರಾಣ ಹೋಗುವುದಿಲ್ಲ.
ಆದರೆ‌ ನೀರಿಗೆ ಬಿದ್ದಾಗ ಈಜಲು‌ ಬಾರದಿದ್ದರೆ ಪ್ರಾಣ ಹೋಗುತ್ತದೆ.
ಪರಿಸ್ಥಿತಿ ಎಂದೂ ಸಮಸ್ಯೆಯಾಗದು.
ಆದರೆ ಪರಿಸ್ಥಿತಿಯನ್ನು ಎದುರಿಸಲಾಗದಿದ್ದರೆ ಅದೇ ಸಮಸ್ಯೆಯಾಗುತ್ತದೆ.

21. ಎಲೆ ಮೇಲೆ ಕುಳಿತ ನೀರಿನ ಹನಿಗೆ ಗೊತ್ತಿರಲಿಲ್ಲ 
'ಸೂರ್ಯ ಬರುವ ತನಕ ಮಾತ್ರ ನನ್ನ ಸೊಗಸು' 
ಅಂತ. ಹನಿಯನ್ನು ಹೊತ್ತ ಎಲೆಗೂ ಗೊತ್ತಿರಲಿಲ್ಲ 
'ನೀರು ಮುಗಿಯುವ ತನಕ ಮಾತ್ರ ನನ್ನ ಬದುಕು ಅಂತ' 
ಜೀವನದಲ್ಲಿ ಯಾವುದೂ ಶಾಶ್ವತವಲ್ಲ.

22. ಪ್ರೀತಿಸುವುದು ನಿಸರ್ಗ ನಿಯಮ
ಪ್ರೀತಿಯೆಂಬ ಭಾವನೆಗಾಗಿ ಪ್ರೀತಿಸುತ್ತೇವೆ, 
ಅದೊಂದು ರೀತಿಯ ವಿಚಿತ್ರ ಪ್ರತಿಕ್ರಿಯೆ ಕೆಲವರು ಸ್ವಾರ್ಥಕ್ಕಾಗಿ ಪ್ರೀತಿಸುತ್ತಾರೆ,
ಮತ್ತೆ ಕೆಲವರು ನಿಸ್ವಾರ್ಥಿಗಳಾಗಿ ಪ್ರೀತಿಸುತ್ತಾರೆ.

23. ಅಮವಾಸ್ಯೆ ರಾತ್ರಿಯಂದು ನೂರು ನಕ್ಷತ್ರಗಳಿದ್ದರೇನು ಪ್ರಯೋಜನ?
ದಾರಿ ಬೆಳಕಿಗೆ ಮನೆ ದೀಪವೇ ಬೇಕು. 
ಎಷ್ಟೇ ಜನ ಉಳ್ಳವರು/ಬಲಿಷ್ಠರು ಜೊತೆಯಿದ್ದರೂ 
ಅವರೆಲ್ಲ ದೈವದಂತೆ ದೂರವಿರುವರು. 
ಕಷ್ಟದಲ್ಲಿ ಬರುವುದು ಮತ್ತೊಬ್ಬ ಕಷ್ಟಜೀವಿ/ಬಡವ.

24. ಶತ್ರುಗಳನ್ನು ನಿಶ್ಯಕ್ತರು ದ್ವೇಷಿಸುತ್ತಾರೆ, 
ಬಲಶಾಲಿಗಳು ಕ್ಷಮಿಸುತ್ತಾರೆ, ಬುದ್ದಿವಂತರು ನಿರ್ಲಕ್ಷಿಸುತ್ತಾರೆ. 
ಬಲಶಾಲಿಗಳಾಗಿ ಇಲ್ಲವೇ ಬುದ್ದಿವಂತರಾಗಿ ವರ್ತಿಸಿ.
ಯಾವಾಗಲೂ ಒಳ್ಳೆಯವರಾಗಿ ಬಾಳಿ. 
ಆದರೆ ಒಳ್ಳೆಯವರೆಂದು ಸಾಬೀತು ಮಾಡಲು ಸಮಯ ವ್ಯರ್ಥ ಮಾಡಬೇಡಿ.

25. ಸೌಂದರ್ಯಕ್ಕೆ ಬಹಳ ಬೇಗ ಮರುಳಾಗಿಬಿಡುತ್ತೇವೆ ಆದರೆ,
ಬಾಳಬೇಕಾಗಿರುವುದು ವ್ಯಕ್ತಿತ್ವದ ಜೊತೆ ಎಂಬ ವಾಸ್ತವ ಗೊತ್ತಿರುವುದಿಲ್ಲ. 
ಮನೆಯ ಬಾಗಿಲು ಎಷ್ಟೇ ಸುಂದರವಾಗಿದ್ದರೂ ಬಾಗಿಲಲ್ಲೇ ಯಾರು ವಾಸಿಸುವುದಿಲ್ಲ.




No comments: