karunada geleya

dsfdsf

ಕುವೆಂಪು ರವರ ಜನಪ್ರೀಯ ಕವನಗಳು


              ಕನ್ನಡವೇ ಸತ್ಯ - ಎಲ್ಲಾದರು ಇರು ಎಂತಾದರು ಇರು

ಎಲ್ಲಾದರು ಇರು ಎಂತಾದರು ಇರು ||೨||
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು ||೨||
ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ನೀ ಮೆಟ್ಟುವ ನೆಲ, ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮೆಟ್ಟುವ ನೆಲ, ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ ||೨||
ನೀ ಕುಡಿಯುವ ನೀರ್ ಕಾವೇರಿ
ಪಂಪನ ಓದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ
ಕುಮಾರವ್ಯಾಸನ ಆಲಿಪ ಕಿವಿಯದು
ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಬೆಳ್ಗೊಳ ಬೇಲೂರ್‍ಗಳ ನೆನೆಯುವ ಮನ
ಮಲೆನಾಡಿಗೆ ಹೊಂಪುಳಿ ಹೋಗುವ ಮನ
ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರೋಮಾಂಚನಗೊಳುವಾ ತನು ಮನ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೆ ಮಿಥ್ಯ




                                ವಿಶ್ವಮಾನವಗೀತೆ – ಅನಿಕೇತನ

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!


                 ನಾಡ ಗೀತೆ 

ಜಯ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಜಯ ಸುಂದರ ನದಿವನಗಳ ನಾಡೆ |
ಜಯ ಹೇ ರಸಋಷಿಗಳ ಬೀಡೆ |
ಭೂದೇವಿಯ ಮುಕುಟದ ನವ ಮಣಿಯೆ |
ಗಂಧದ ಚಂದದ ಹೊನ್ನಿನ ಗಣಿಯೆ |
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಜನನಿಯ ಜೋಗುಳ ವೇದದ ಘೋಷ |
ಜನನಿಗೆ ಜೀವವು ನಿನ್ನಾವೇಶ |
ಹಸುರಿನ ಗಿರಿಗಳ ಸಾಲೆ |
ನಿನ್ನಯ ಕೊರಳಿನ ಮಾಲೆ |
ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಶಂಕರ ರಾಮಾನುಜ ವಿದ್ಯಾರಣ್ಯ |
ಬಸವೇಶ್ವರರಿಹ ದಿವ್ಯಾರಣ್ಯ |
ರನ್ನ ಷಡಕ್ಷರಿ ಪೊನ್ನ |
ಪಂಪ ಲಕುಮಿಪತಿ ಜನ್ನ |
ಕಬ್ಬಿಗರುದಿಸಿದ ಮಂಗಳ ಧಾಮ |
ಕವಿ ಕೋಗಿಲೆಗಳ ಪುಣ್ಯಾರಾಮ |
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ತೈಲಪ ಹೊಯ್ಸಳರಾಳಿದ ನಾಡೆ |
ಡಂಕಣ ಜಕಣರ ನೆಚ್ಚಿನ ಬೀಡೆ |
ಕೃಷ್ಣ ಶರಾವತಿ ತುಂಗಾ |
ಕಾವೇರಿಯ ವರ ರಂಗಾ |
ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

ಸರ್ವಜನಾಂಗದ ಶಾಂತಿಯ ತೋಟ |
ರಸಿಕರ ಕಂಗಳ ಸೆಳೆಯುವ ನೋಟ |
ಹಿಂದೂ ಕ್ರೈಸ್ತ ಮುಸಲ್ಮಾನ |
ಪಾರಸಿಕ ಜೈನರುದ್ಯಾನ |
ಜನಕನ ಹೋಲುವ ದೊರೆಗಳ ಧಾಮ |
ಗಾಯಕ ವೈಣಿಕರಾರಾಮ |
ಕನ್ನಡ ನುಡಿ ಕುಣಿದಾಡುವ ದೇಹ |
ಕನ್ನಡ ತಾಯಿಯ ಮಕ್ಕಳ ಗೇಹ |

ಜಯ ಭಾರತ ಜನನಿಯ ತನುಜಾತೆ |
ಜಯ ಹೇ ಕರ್ನಾಟಕ ಮಾತೆ

No comments: