ಒಂದು ದಿನ ಸಂಜೆ ಧೈರ್ಯ ಮಾಡಿ ಮಲ್ಲಿಗೆ ಹೂವು ತಂದು ಕೈಲಿಡುತ್ತ ಬರ್ತೀಯ ಅಂತ ಕೇಳಿದ ವೈಯಾರ ತೋರಿಸ್ತಾ ಹೂವು ತೆಗೊಂಡು ಮುಡಿಗೇರಿಸುತ್ತ. ಅವರು ದಿವಸಕ್ಕೆ ಎರಡು ಗಂಟೆ ಲೆಕ್ಕಕ್ಕೆ ಜಾಸ್ತಿ ಬರೀತಾರೆ ನಿನ್ನ ಒಂದು ಚೆಂಡು ಹೂವಿಗೆ ಆಸೆ ಜಾಸ್ತಿ ಆಯ್ತು ಅಂತ ಧಿಮಾಕಿಂದ ಮೈ ಕುಣಿಸಿ ಹೊರಟೇ ಹೋಗಿದ್ಲು ಹಲ್ಕ ಮುಂಡೆ ಹೊಟ್ಟೆಗೆ ತಣ್ಣೀರು ಹಾಕೊಂಡು ಹೂವು ತಂದಿದ್ದೆ ಅಂತ ಅವಮಾನದಿಂದ ಒಳಗೊಳಗೆ ಚಡಪಡಿಸಿದ್ದ. ಸಂಕಣ್ಣ ಮಾತಿಗೆ ತಪ್ಪಲಿಲ್ಲ ಒಂದು ವರ್ಷದಲ್ಲೆ ಅವನು ವ್ಯವಹಾರ ಮಾಡುವ ಸಣ್ಣ ಬ್ಯಾಂಕಿನಲ್ಲಿ ಅಟೆಂಡರ್ ಕೆಲ್ಸ ಕೊಡಿಸಿದ್ದ ಮಂಜಾತ ಕೂಡ ಉಡುಪಿಯಂತ ಪೇಟೆಯಲ್ಲಿ ಪ್ಯಾಂಟ್ ಶರ್ಟು ಹಾಕಿಕೊಂಡು ಆಪೀಸ್ ಗೆ ಹೋಗುವ ಒಂದು ದೊಡ್ಡ ಜನ ಆಗಿ ಬಿಟ್ಟಿದ್ದ ಒಂದು ದಿನವೂ ಎಲ್ಲಿದ್ದಾನೆ ಅಂತ ಹುಡುಕಿಕೊಂಡು ಬಾರದ ಅಪ್ಪಯ್ಯನ ಬಗ್ಗೆ ಅಥವ ಅವನ ಊರಿನ ಬಗ್ಗೆ ಧಿಕ್ಕಾರವಲ್ಲದೆ ಬೇರೇನು ಇರಲಿಲ್ಲ ಆದರೂ ಆಪೀಸರ್ ನಂತೆ ಒಂದು ಸರ್ತಿ ಊರಿಗೆ ಹೊಗಲೇ ಬೇಕು ಅಂತ ಆಸೆ ಜಾಸ್ತಿಯಾಗ್ತ ಇತ್ತು. ಜಾಂಕಿಯನ್ನು ನರ್ಸಿಮನ ಮಗನ ಒತ್ತಡದಿಂದ ಬಿಡಿಸಿಕೊಂಡು ಬರಬೇಕು ಅಂತ ಅನಿಸುತ್ತಲೇ ಇತ್ತು ಒಂದು ಶನಿವಾರ ಸಂಜೆ ಊರಿಗೆ ಬಸ್ ಹತ್ತಿ ಹೊರಟೆ ಬಿಟ್ಟ ಬಸ್ ಇಳಿದಾಗ ಕತ್ತಲೆಯಾಗುತ್ತ ಬಂದಿತ್ತು ಗೋಳಿ ಮರ ಅದರ ಪಕ್ಕದಲ್ಲಿ ಇಳಿದು ಹೋಗುವ ಗದ್ದೆ ಪುಣಿಯ ದಾರಿ ಸುತ್ತ ಮುತ್ತಲಿನ ಮರ ಗಿಡ ಯಾವುದೂ ಬದಲಾಗಿಲ್ಲ ಅವನಿಗೆ ಒಳಗೊಳಗೆ ಅವನ ಬಗ್ಗೆಯೆ ಹೆಮ್ಮೆ ಅಪ್ಪ ಮಾಡಿದ್ದನ್ನೆ ಮಗ ಮಾಡ್ತಾನೆ ಮಗ ಮಾಡಿದ್ದನ್ನೆ ಮೊಮ್ಮಗ ಮಾಡ್ತಾನೆ ಇನ್ನು ಯಾವುದಾದ್ರು ಬದಲಾಗುವುದು ಹೇಗೆ ಅಂತ ಜೋರಾಗಿಯೇ ನಕ್ಕು ಬಿಟ್ಟಿದ್ದ.
ದಾರಿಯ ಬದಿಯಲ್ಲಿ ಏನೋ ಸರ ಸರ ಹರಿದಂತೆ ಆಗಿ ನೋಡಿದರೆ ಕೇರೆ ಹಾವು ಚಡಪಡಿಸುತ್ತಿದ್ದ ಕಪ್ಪೆಯನ್ನು ಬಾಯಲ್ಲಿ ಕಚ್ಚಿಕೊಂಡು ಓಡುತ್ತಿತ್ತು ಒಮ್ಮೆಗೆ ರೋಮಗಳೆಲ್ಲ ನೆಟ್ಟಗೆ ನಿಂತು ಹೆಜ್ಜೆಗಳು ಅಳುಕತೊಡಗಿದವು ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ರಕ್ತ ವರ್ಣದ ಸೂರ್ಯನ ಹಿನ್ನೆಲೆಯಲ್ಲಿ ಯಾರೋ ಬೀಸು ವೇಗದಲ್ಲಿ ನಡೆದು ಬರುತ್ತಿದ್ದರು ಹತ್ತಿರ ಹತ್ತಿರ ಬರುತ್ತಿದ್ದಂತೆ ಅಂದುಕೊಂಡ ನರ್ಸಿಮ ಈ ಶನಿ ಹಿಡಿದವನೆ ಎದುರು ಸಿಗಬೇಕ ತುಂಬಾ ಬದಲಾಗಿದ್ದಾನೆ ಅನಿಸ್ತು ಸೊಂಟದ ಸುತ್ತ ಸುತ್ತಿಕೊಳ್ಳುತ್ತಿದ್ದ ಹಳೆ ಬೈರಾಸ್ ಹೋಗಿ ಬಿಳಿ ಶುಭ್ರ ಪಂಚೆ ಬಂದಿದೆ ಬರಿ ಮೈಗೆ ಬಿಳಿ ಶರ್ಟ್ ಮೇಲೊಂದು ಶಾಲು ರಭಸವಾಗಿ ಹೋಗ್ತಾನೆ ಇದ್ದಾನೆ ಇವನನ್ನು ನೋಡಲೇ ಇಲ್ಲವೇನೊ ಎಂಬಂತೆ ಯೇ ನರ್ಸಿಮ ಎಲ್ ಹೊರ್ಟೆ ಮಾರಾಯ ಈ ಗಡಿಬಿಡಿಲಿ ಅಂತ ಕೇಳಿದ ಅವನು ತಿರುಗಿಯೂ ನೋಡದೆ ನಮ್ ಗಂಡಿಗ್ ಒಂದು ಒಳ್ಳೆ ಹೆಣ್ಣ್ ಕಾಣುಕು ಅವ್ನಿಗೆ ಮದಿ ಪ್ರಾಯ ಆಯ್ತಲೆ ನನ್ ಜವಾಬ್ದಾರಿ ನಾನು ಮಾಡ್ಕಲೆ ಅಂತ ಹೊರಟೇ ಹೋದ ಈ ನರ್ಸಿಮನಿಗೆ ಏನಾಯ್ತೊ ಏನೊ ಅಂತ ಯೋಚಿಸುತ್ತ ಊರೊಳಗೆ ಬರುತ್ತಿದ್ದಂತೆ ಪೂರ್ತಿ ಕತ್ತಲೆಯಾಗಿತ್ತು ದೂರದಲ್ಲಿ ಒಂದು ಕಡೆ ತುಂಬ ಬೆಳಕು ಕಾಣಿಸ್ತ ಇತ್ತು ಮರ ಗಿಡಗಳ ಎಲೆಗಳು ನೆರಳು ಬೆಳಕಿನಾಟದಲ್ಲಿ ಪ್ರಕೃಉತಿ ಭೀಕರವಾಗಿಸಲು ಪ್ರಯತ್ನಿಸಿದಂತಿತ್ತು ಹತ್ತಿರ ಹೋಗುತ್ತಿದ್ದಂತೆ ಗೊತ್ತಾಯ್ತು ಅದು ನರ್ಸಿಮಂದೆ ಮನೆ ಅಂಗಳದ ನಾಲ್ಕೂ ಮೂಲೆಯಲ್ಲಿ ನಾಲ್ಕು ಗ್ಯಾಸ್ ಲೈಟ್ ಗಳು ಉರಿಯುತ್ತಿದ್ದವು ಗ್ಯಾಸ್ ಲೈಟ್ ಬೆಳಕಲ್ಲಿ ಗುಂಪು ಕೂಡಿದ ಜನರ ಮಧ್ಯದಲ್ಲಿ ಚಟ್ಟದ ಮೇಲೆ ಅದೇ ಬಿಳಿ ಉಡುಪುಗಳನ್ನು ಧರಿಸಿ ನರ್ಸಿಮ ಮಲಗಿದ್ದ. ಇವನಿಗೆ ಮೈ ಕೈಯಲ್ಲಿ ಬೆವರು ಕಿತ್ತುಕೊಂಡು ಬಂದು ಅಲ್ಲೇ ಹೇತು ಬಿಡಬೇಕು ಅನಿಸುವಷ್ಟು ಭಯ ಆಗಿತ್ತು ಕಾಲಿನಲ್ಲಿ ಬಲ ಕೂಡಿಸಿಕೊಂಡು ಆಚೆ ಈಚೆ ನೋಡದಂತೆ ಒಂದೇ ಓಟದಲ್ಲಿ ಓಡಿ ಅವನ ಮನೆಯ ಜಗಲಿಯಲ್ಲಿ ನಿಂತು ಒಂದು ಕ್ಷಣ ಸುಧಾರಿಸಿಕೊಂಡ ಒಳಗೇನೋ ಸದ್ದು ಕೇಳಿಸಿದಂತೆ ಆಗಿ ಕಿಟಕಿಯ ಮೂಲಕ ಬಗ್ಗಿ ನೋಡಿದ ಮೊದಲಿಗೆ ಯಾರು ಅಂತ ಗೊತ್ತಾಗಲಿಲ್ಲ. ಸಣ್ಣ ಬೆಳಕಿಗೆ ಕಣ್ಣು ಹೊಂದಿಸಿ ನೋಡಿದರೆ ಅವನ ಜಾಂಕಿ ಅವಳಿಗೆ ದೇಹ ಒತ್ತರಿಸಿಕೊಂಡವನಾರು ಅಂತ ಮತ್ತೆ ಮತ್ತೆ ನೋಡಿದಾಗ ಅಪ್ಪಯ್ಯನನ್ನು ಕಂಡು ತಲೆ ಸುತ್ತು ಬಂದು ಅಲ್ಲೆ ಕುಸಿದು ಕುಳಿತಿದ್ದ ಭಯ ಕೋಪ ಗಳೆಲ್ಲ ಸತ್ತು ಹೋಗಿ ಮೈಯಲ್ಲಿ ಶಕ್ತಿ ಇಲ್ಲದಂತವನಾಗಿ ಅಲ್ಲೆ ಜಗಲಿಯಲ್ಲಿ ಒಂದು ಕ್ಷಣ ಬಿದ್ದುಕೊಂಡಿದ್ದ ಈ ದೇಹವನ್ನು ಹಳೆ ಅಂಗಿಯ ತರ ಬಿಸಾಡಿ ಬಿಡಬೆಕು ಅನಿಸಿತ್ತು ನಿಧಾನಕ್ಕೆ ಎದ್ದು ನರ್ಸಿಮನ ಮನೆ ಕಡೆ ಹೊರಟ ನರ್ಸಿಮನ ಚಿತೆಗೆ ಬೆಂಕಿ ಇಡುವವರು ಯಾರು ಅಂತ ಪ್ರಶ್ನೆ ಎದ್ದಿತ್ತು ನಿಂತವರು ಮಾತಾಡಿಕೊಳ್ಳುತ್ತಿದ್ದರು. ಅವನ್ ಮಗ ಇದ್ದಿರೆ ಈ ರಗಳೆ ಇರ್ಲಿಲ್ಲೆ ಅವನ್ನು ಬಾಮಿಗೆ ಬಾವಿಗೆ ದೂಡಿ ಹಾಕ್ದವರು ಯಾರು ಅಂತ ಗೊತ್ತಾಯ್ದೆ ಹೋಯ್ತು ಕಾಣಿ ಮಂಜಾತ ದೊಡ್ಡ ದೊಡ್ಡ ನೆರಳಿನ ಸಣ್ಣ ಸಣ್ಣ ಮನುಷ್ಯರ ಗುಂಪನ್ನು ದಾಟಿಕೊಂಡು ಬಂದು ನೆರಳೇ ಇಲ್ಲದೆ ಚಟ್ಟದಲ್ಲಿ ಮಲಗಿದ್ದ ನರ್ಸಿಮನ ಬಳಿ ನಿಂತು ನಾನ್ ಬೆಂಕಿ ಇಡ್ತೆ ಅಂತ ಜೋರಾಗಿ ಕೂಗಿ ಹೇಳಿದ ಎಲ್ಲರೂ ಅವರವರ ಲೋಕದಲ್ಲೆ ಮುಳುಗಿದ್ದರು ಮತ್ತೊಮ್ಮೆ ಕೂಗಿದ ಯಾರೂ ಗಮನಿಸಲೇ ಇಲ್ಲ ತಾಳ್ಮೆ ಕಳೆದುಕೊಂಡ ಮಂಜಾತ ಮತ್ತೆ ಮತ್ತೆ ಕೂಗುತ್ತಲೆ ಇದ್ದ ಜನರು ಇನ್ನೂ ಗಮನಿಸಲೇ ಇಲ್ಲ ಇಷ್ಟೆಲ್ಲಾ ನಡೀತ ಇದ್ರೂ ಮಂಜಾತನ ದೇಹ ಮಾತ್ರ ಅನಾಥವಾಗಿ ಹಳೆ ಅಂಗಿಯಂತೆ ಮುದುಡಿಕೊಂಡು ಇನ್ನೂ ಜಗಲಿಯ ಮೇಲೇ ಬಿದ್ದಿತ್ತು.
ಕೃಪೆ
Read more at: http://kannada.oneindia.in/literature/short-story/karma-a-kannada-short-story-dinesh-udupi-080368.html
No comments:
Post a Comment